ಡಾಕೊಡಾಂಟ 
ಮೀಸೊeóÉೂೀಯಿಕ್ ಯುಗದಲ್ಲಿ ಜೀವಿಸಿದ್ದು ಈಗ ನಿರ್ವಂಶವಾಗಿರುವ ಸ್ತನಿಗಳ ಒಂದು ಗಣ. ಉರಗ ಮತ್ತು ಸ್ತನಿಗಳೆರಡರ ಗುಣಲಕ್ಷಣಗಳನ್ನು ತೋರಿಸುವ ಇವುಗಳ ಪಳೆಯುಳಿಕೆಗಳ ಟ್ರಯಾಸಿಕ್ ಮತ್ತು ಜುರಾಸಿಕ್ ಅವಧಿಗಳಲ್ಲಿ ದೊರೆತಿವೆ. ಪ್ರತ್ಯೇಕಗೊಂಡಿದ್ದ ಇವುಗಳ ಹಲ್ಲುಗಳು ಮತ್ತು ದವಡೆಗಳು ಉತ್ತರ ಅಮೆರಿಕದಲ್ಲಿ ಸಿಕ್ಕಿವೆ. ಡಾಕೊಡಾಂಟಗಳ ಹೆಚ್ಚಿನ ಅವಶೇಷಗಳನ್ನು ಯಥೇಚ್ಛವಾಗಿ ಸೌತ್‍ವೇಲ್ಸ್‍ನ ಟ್ರಯಾಸಿಕ್ ಅವಧಿಯ ಕೊನೆಯಲ್ಲಿನ ಶಿಲೆಗಳಲ್ಲಿ ಸಿಕ್ಕಿರುವ ತಲೆಬುರುಡೆ ಮತ್ತು ಭುಜಾಸ್ಥಿವಲಯದ ಭಾಗಗಳಿಂದ ಗುರುತಿಸಿದ್ದಾರೆ. ಹಿಂದವಡೆ ಹಲ್ಲುಗಳ ಮೇಲೆ ಸಾಲಾಗಿ ಮೂರು ಮೊನೆಗಳಿವೆ. ಇದರಿಂದಾಗಿ ದವಡೆಗಳಿಗೆ ಟ್ರಯಕೊನೊಡಾಂಟ್ ದವಡೆಗಳು ಎಂದು ಹೆಸರು. ಡೆಂಟರಿ ಮೂಳೆಯ ಮೇಲೆ ಚೆನ್ನಾಗಿ ಗುರುತಿಸಲು ಸಾಧ್ಯವಾಗುವಂಥ ಕಾಂಡೈಲ್ ಇದೆ. ದವಡೆಯ ಕೆಳ ಅಂಚಿನಲ್ಲಿ ಒಂದು ಚಾಚುರಚನೆ ಉಂಟು. ಅದರ ಮೇಲೆ ಒಂದು ತೊಟ್ಟಿ (ಟ್ರಫ್) ಇದೆ. ಇದು ತೀರಿಯನ್ ಸ್ತನಿಗಳಲ್ಲಿ ಕಾಣಬರದು. ಆರ್ಟಿಕ್ಯುಲರ್ ಮತ್ತು ಇತರ ಮೂಳೆಗಳು ಸಾಕಷ್ಟು ದೊಡ್ಡದಾಗಿದ್ದುವೆಂದು ಆಧಾರಗಳಿದ್ದಾಗ್ಯೂ (ಉರಗ ಲಕ್ಷಣ) ಡೆಂಟರಿ ಮತ್ತು ಸ್ಕ್ವಾಮೋಸಲ್‍ಗಳ ನಡುವೆ ಕೆಳದವಡೆ ಕೀಲುಗೂಡಿಸಲ್ಪಟ್ಟಿದೆ. ಮಿದುಳಿನ ಪೆಟ್ಟಿಗೆ ಎತ್ತರವಾಗಿದ್ದು ಕಪೋಲಾಸ್ಥಿ ಕುಳಿ (ಟೆಂಪೊರಲ್ ಫಾಸ) ಕಣ್ಣುಕುಳಿಗೆ (ಆರ್ಬಿಟ್) ಸೇರಿಕೊಂಡಿದೆ. ಡಾಕೊಡಾಂಟಗಳ ಭುಜಾಸ್ಥಿವಲಯದಲ್ಲಿ ಮಾನೋಟ್ರೀಮುಗಳಲ್ಲಿರುವ ಮೂಳೆಗಳೇ ಇರುವುದಾದರೂ ಅವು ಉರಗಗಳ ಮೂಳೆಗಳ ರೂಪವನ್ನೇ ತೋರುವುವು. ಮೇಲೆ ತಿಳಿಸಿರುವ ಗುಣಗಳ ಆಧಾರದ ಮೇಲೆ ಡಾಕೊಡಾಂಟ ರೀತಿಯ ಪ್ರಾಣಿಗಳಿಂದ ಮಾನೋಟ್ರೀಮುಗಳು ವಿಕಾಸಗೊಂಡಿವೆಯೆಂದು ಪ್ರತಿಪಾದಿಸಲಾಗಿದೆ.
(ಎ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ